ನೂರೊಂದ -
ಸುಮಾರು 1740. ಸೌಂದರ ಕಾವ್ಯದ ಕರ್ತೃ. ಮ್ಯಸೂರು ದೊರೆ ಇಮ್ಮಡಿ ಕೃಷ್ಣರಾಜನ (1734-1766) ಸಮಕಾಲೀನ. ಕಳಲೆ ನಂಜರಾಜನ ಆಶ್ರಿತನಾಗಿದ್ದಂತೆ ಕಾಣುತ್ತದೆ. ವೀರಶೈವ. ಕೃತಿ 13 ಸಂಧಿ 1395 ಪದ್ಯಗಳನ್ನೊಳಗೊಂಡಿದ್ದು ಸಾಂಗತ್ಯದಲ್ಲಿದೆ. ನಂಜುಂಡಲಿಂಗನ ಕೃಪೆಯಿಂದ ಕೃತಿಯನ್ನು ರಚಿಸಿರುವುದಾಗಿ ಕವಿ ತಿಳಿಸಿದ್ದಾನೆ. ಪ್ರತಿ ಸಂಧಿಯ ಕೊನೆಯಲ್ಲಿ ಪಶ್ಚಿಮ ರಂಗೇಶನ ಸ್ತುತಿಯಿದೆ.

	ಸೌಂದರಕಾವ್ಯ ಐತಿಹಾಸಿಕ ಪರಂಪರೆಗೆ ಸಂಬಂಧಿಸಿದ ಕೃತಿ. ಇದರಲ್ಲಿ ಮೈಸೂರು ಅರಸು ಇಮ್ಮಡಿ ಕೃಷ್ಣರಾಜನ ದಳಪತಿಗಳಾದ ಕಳಲೆ ದೇವರಾಜ, ನಂಜರಾಜರು ಶ್ರೀರಂಗಪಟ್ಟಣವನ್ನು ಆಕ್ರಮಿಸಲು ತೊಡಗಿದ ಮೊಗಲರ ಬಾರಮಲ್ಲ ಮತ್ತು ಬಾದುರರೊಡನೆ ನಡೆಸಿದ ಹೋರಾಟ, ಹಾಗೂ ಗಳಿಸಿದ ವಿಜಯದ ವಿವರಗಳಿವೆ. ಕಾವ್ಯದಲ್ಲಿ ಬರುವ ಅಂದಿನ ರಾಜರ ಬಗೆಗಿನ ಉಲ್ಲೇಖಗಳು, ಯುದ್ದವರ್ಣನೆಗಳು, ಮಹಾನವಮಿ ಉತ್ಸವ, ಚಂಡಿಕಾ ಪೂಜೆ, ಮಲ್ಲರ ಕಾಳಗ, ವಿಜೇತರ ಸನ್ಮಾದಿಗಳ ಪರಿಶೀಲನೆಯಿಂದ ಅಂದಿನ ಕಾಲದ ರಾಜಕೀಯ, ಸಾಂಸ್ಕøತಿಕ ಹಾಗೂ ಸಾಮಾಜಿಕ ಪರಿಸ್ಥಿತಿಯ ಚಿತ್ರಣವನ್ನು ಕಂಡುಕೊಳ್ಳಬಹುದಾಗಿದೆ. ಈ ದೃಷ್ಟಿಯಿಂದ ಈ ಕೃತಿ ಅಂದಿನ ಕಾಲದಲ್ಲಿನ ರಾಜಕೀಯ ಪರಿಸ್ಥಿಯನ್ನು ಅಭ್ಯಸಿಸುವವರಿಗೆ ಮೂಲಸಾಮಾಗ್ರಿಯನ್ನೋದಗಿಸುವ ತವನಿಧಿಯಾಗಿದೆ.
(ಎಸ್.ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ